ಇಡುಗೂರು ರುದ್ರಕವಿ
(?-1887). ಜನನ ಗೌರೀಬಿದನೂರು ತಾಲ್ಲೂಕು ಇಡುಗೂರು. ರಾಜಮ್ಮ ಮತ್ತು ಪುಷ್ಪದಾರ್ಯರೆಂಬುವರು ತಾಯಿ ತಂದೆಯರು. ಗುರುವಿನ ಹೆಸರು ಗೊತ್ತಿಲ್ಲ. ಗುಬ್ಬಿಯಲ್ಲಿ ಗುರುಗಳೊಬ್ಬರ ಆಶ್ರಯದಲ್ಲಿ ಕಾವ್ಯ ನಾಟಕ, ಅಲಂಕಾರ, ವ್ಯಾಕರಣ, ಛಂದಸ್ಸು ಮುಂತಾದ ಶಾಸ್ತ್ರಗಳಲ್ಲಿ ಶಿಕ್ಷಣ ಪಡೆದುದಲ್ಲದೆ ವೀರಶೈವಾಮೃತಮಹಾಪುರಾಣವನ್ನು ಗಮಕರೀತಿಯಲ್ಲಿ ಓದಿ ವ್ಯಾಖ್ಯಾನ ಮಾಡುವ ಸಾಮಥ್ರ್ಯವನ್ನು ಸಹ ಪಡೆದ. ತರುವಾಯ ಶ್ರೀ ಭಟ್ಟುಮೂರ್ತಿ ಎಂಬವರಲ್ಲಿ ಆಂಧ್ರ ಸಾಹಿತ್ಯವನ್ನು ಅಭ್ಯಾಸಮಾಡಿ ಕರ್ಣಾಟಕ ಮತ್ತು ಆಂಧ್ರ ಭಾಷೆಗಳಲ್ಲಿ ಕವಿತಾಸಾಮಥ್ರ್ಯವನ್ನು ಪಡೆದ. ಒಂದು ಬೈಲಾಟದ ನಾಟಕಮಂಡಲಿಯನ್ನು ಸಹ ಸ್ಥಾಪಿಸಿ ಆಂಧ್ರ, ಕರ್ಣಾಟಕ ಪ್ರಾಂತ್ಯಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದ. ಈತ ಶಿವನ ಪಾತ್ರವನ್ನು ಅಭಿನಯಿಸುತ್ತಿದ್ದ ಶಿವನಾಟಕ ಪ್ರಖ್ಯಾತಿ ಪಡೆದಿತ್ತು. 1841 ಸುಮಾರಿನಲ್ಲಿ ಆರಂಭವಾದ ಈ ನಾಟಕ ಮಂಡಲಿ 1867ರವರೆಗೆ ಅವ್ಯಾಹತವಾಗಿ ನಡೆಯಿತು. 1856ರ ಸುಮಾರಿನಲ್ಲಿ ಮೈಸೂರು ಅರಮನೆಯಲ್ಲಿ ಅಭಿನಯಿಸಲ್ಪಟ್ಟ ಶಿವನಾಟಕವನ್ನು ನೋಡಿ ಹರ್ಷಿತರಾದ ಆಳಿದ ಮುಮ್ಮಡಿ ಕೃಷ್ಟರಾಜ ಮಹಾಪ್ರಭುಗಳು ಇವನಿಗೆ ಕರ್ಣಾಟಕಾಂಧ್ರೋಭಯಭಾಷಾಕವಿತಾವಿಶಾರದ ಎಂಬ ಪ್ರಶಸ್ತಿ ನೀಡಿದಂತೆ ತಿಳಿದುಬರುತ್ತದೆ. ಈತ ಬರೆದ ಕನ್ನಡ ಯಕ್ಷಗಾನ ಶಿವನಾಟಕ (ಪೂರ್ವಾರ್ಧ-ಉತ್ತರಾರ್ಧ); ಕನ್ನಡ ಮಾರ್ಕಂಡೇಯ ಚರಿತ್ರೆ: ಆಂಧ್ರ ಯಕ್ಷಗಾನ ಮಾರ್ಕಂಡೇಯ ಚರಿತ್ರಮು: ವೆಂಕಟೇಶ ಮಹಾತ್ಮ್ಯಮು (ಮೀನಾಕ್ಷೀ ಕಲ್ಯಾಣ); ವಿರೂಪಾಕ್ಷ ಮಹಾತ್ಮ್ಯಮು; ಮುಮ್ಮಡಿ ಕೃಷ್ಣರಾಜೇಂದ್ರ ಪ್ರಶಂಸಾ; ಅಕ್ಷರಾಂಕನ ಗದ್ಯಟೀಕೆ (ಪಾಲ್ಕುರಿಕೆ ಸೋಮನಾಥ ಕೃತಿಯ ಟೀಕೆ); ಕವಿರುದ್ರಪಶತಕಮು; ಮುರುಡಪ್ಪ ಶತಕಮು; ಮುಂತಾದ ಸುಮಾರು 13 ಗ್ರಂಥಗಳು ಉಪಲಬ್ಧವಾಗಿವೆ.									
(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ